Back
Home » ಆರೋಗ್ಯ
ನೀರಿನ ಉಪವಾಸ: ಏನಿದರ ಪ್ರಯೋಜನ ಮತ್ತು ಏನಿವೆ ಅಡ್ಡ ಪರಿಣಾಮಗಳು?
Boldsky | 6th Dec, 2019 01:20 PM
 • ನೀರಿನ ಉಪವಾಸ ನಿಮಗೆ ಒಳ್ಳೆಯದೇ?

  ಉಪವಾಸದ ಮೂಲಕ ದೇಹದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ನವಚೈತನ್ಯ ಪಡೆಯುತ್ತದೆ. ಆದರೆ ಇದನ್ನು ಎಪ್ಪತ್ತೆರಡು ಗಂಟೆಗೂ ಮೀರಿ ನಿರ್ವಹಿಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಿಜ್ಞಾನವೇ ಹೇಳುತ್ತದೆ. ನಮ್ಮ ದೇಹದ ಎಲ್ಲಾ ಜೀವಕೋಶಗಳೂ ಸತ್ತು ಹೊಸ ಜೀವಕೋಶಗಳು ಹುಟ್ಟುತ್ತಲೇ ಇರುತ್ತವೆ. ಹೀಗೆ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಮ್ಮ ಶರೀರ ಪರಿಪೂರ್ಣವಾಗಿ ಹೊಸ ಜೀವಕೋಶಗಳಿಂದಾಗಿರುತ್ತದೆ. ಇದು ಒಟ್ಟು ಐದು ಬಾರಿ ಮಾತ್ರವೇ ಆಗಲು ಸಾಧ್ಯ. ಇದೆ ಕಾರಣಕ್ಕೆ ಷಷ್ಠಿ ಎಂಬ ಪದಕ್ಕೆ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಜೀವಕೋಶಗಳ ಹುಟ್ಟುವಿಕೆಯ ವಿಧಾನಕ್ಕೆ (autophagy) ಎಂದು ಕರೆಯುತ್ತಾರೆ. ನೀರಿನ ಉಪವಾಸ ಈ ಕ್ರಿಯೆಯನ್ನು ಸುಲಭವಾಗಿಸುತ್ತದೆ. ಒಂದು ವೇಳೆ ಜೀವ ರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸಲು ಉಪವಾಸ ಅನುಸರಿಸುತ್ತಿದ್ದರೆ ಒಂದು ಅಥವಾ ಎರಡು ದಿನದ ಉಪವಾಸ ಸಾಕು. ಇದನ್ನು ವೈದ್ಯರ ಸಲಹೆ ಮೇರೆಗೆ ನಿರ್ವಹಿಯಬೇಕು. ತೂಕ ಇಳಿಸುವ ನಿಟ್ಟಿನಲ್ಲಿ ಉಪವಾಸ ಆಚರಿಸುವುದಾದರೆ ಇದು ಅಲ್ಪಾವಧಿಯದ್ದಾಗಬೇಕು ಹಾಗೂ ಪ್ರತಿ ಹದಿನೈದು ದಿನಗಳಿಗೊಮ್ಮೆ ಮಾತ್ರವೇ ನಿರ್ವಹಿಸಬೇಕು.


 • ನೀರಿನ ಉಪವಾಸವನ್ನು ಯಾರೆಲ್ಲಾ ಅನುಸರಿಸಬಹುದು?

  ಒಂದು ವೇಳೆ ನಿಮ್ಮ ವೈದ್ಯರು ಈ ಉಪವಾಸವನ್ನು ಅನುಸರಿಸುವಂತೆ ಸಲಹೆ ನೀಡಿದರೆ

  * ರೋಗ ನಿರೋಧಕ ಶಕ್ತಿ ಕುಂದಿದ್ದು ಇದನ್ನು ಉತ್ತಮಗೊಳಿಸಲು ಬಯಸುವವರಿಗೆ
  * ನಿಮ್ಮ ತೂಕ ಎತ್ತರದ ಅನುಪಾತಕ್ಕೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿದ್ದರೆ
  * ನಿಮ್ಮ ದೇಹದ ಕಾರ್ಯವಿಧಾನವನ್ನು ಪರಿಶೀಲಿಸಲು ಉಪವಾಸದ ಕಾರ್ಯಕ್ರಮವನ್ನು ಅನುಸರಿಸುವಂತೆ ಹೇಳಿದರೆ.
  * ಈ ಉಪವಾಸ ಮಕ್ಕಳನ್ನು ಹೊರತುಪಡಿಸಿ ಉಳಿದ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ನಿರ್ವಹಿಸಬಹುದು.


 • ನೀರಿನ ಉಪವಾಸವನ್ನು ಯಾರೆಲ್ಲಾ ಅನುಸರಿಸಬಾರದು?

  ಒಂದು ವೇಳೆ ನಿಮ್ಮ ವೈದ್ಯರು ನಿಮಗೆ ಅನುಮತಿ ನೀಡದೇ ಇದ್ದರೆ
  ಒಂದು ವೇಳೆ ನಿಮಗೆ ರಕ್ತದಲ್ಲಿ ಅತಿ ಕಡಿಮೆ ಸಕ್ಕರೆ ಇರುವ ತೊಂದರೆಯಾದ hypoglycemia ಇದ್ದರೆ
  ಮಧುಮೇಹಿಗಳು
  ನೀವು ಯಾವುದಾದರೂ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ
  ಗರ್ಭಿಣಿಯರು
  ಬಾಣಂತಿಯರು
  ಮಕ್ಕಳು.


 • ಅಲ್ಪಾವಧಿಯ ನೀರಿನ ಉಪವಾಸದಿಂದ ಹಲವಾರು ಪ್ರಯೋಜನಗಳಿವೆ. ಬನ್ನಿ, ಇವು ಯಾವುವು ಎಂಬುದನ್ನು ನೋಡೋಣ:

  1. ಆಟೋಫ್ಯಾಗಿ(Autophagy)ಯನ್ನು ಪ್ರೇರೇಪಿಸುತ್ತದೆ:

  ಮೇಲೆ ತಿಳಿಸಿದಂತೆ ನಮ್ಮ ದೇಹದ ಹಳೆಯ ಜೀವಕೋಶಗಳು ಸತ್ತು ಹೊಸ ಜೀವಕೋಶಗಳು ಹುಟ್ಟುವ ಕ್ರಿಯೆ ಸತತವಾಗಿ ನಡೆಯುತ್ತಿರುತ್ತದೆ. ಸಾಮಾನ್ಯವಾಗಿ ಕೆಲವು ಜೀವಕೋಶಗಳು ಅಲ್ಪಾಯುವಾಗಿರುತ್ತವೆ ಮತ್ತು ಕೆಲವು (ಮೂಳೆ ಮೊದಲಾದವು) ಕೆಲವಾರು ವರ್ಷಗಳ ಕಾಲ ಬದುಕುತ್ತವೆ. ಜೀವಕೋಶ ತನ್ನ ಕಾರ್ಯ ಮುಗಿಸಿ ಶಿಥಿಲಗೊಂಡ ಬಳಿಕ ಅಥವಾ ಈ ಜೀವಕೋಶ ಆರೋಗ್ಯಕರವಾಗಿದ್ದರೂ ದೇಹಕ್ಕೆ ಇದರ ಅವಶ್ಯಕತೆ ಇಲ್ಲದಿದ್ದರೆ (ವಿಶೇಷವಾಗಿ ಸ್ನಾಯುಗಳ ಜೀವಕೋಶಗಳು) ದೇಹ ಇದನ್ನು ನಿವಾರಿಸಿಬಿಡುತ್ತದೆ. ನಮ್ಮ ಆರೋಗ್ಯ ಈ ಕ್ರಿಯೆಯನ್ನು ಬಲವಾಗಿ ಅವಲಂಬಿಸಿದೆ. ವಿಶೇಷವಾಗಿ ಮೆದುಳು ಮತ್ತು ನರಗಳ ಕ್ಷಮತೆ ಸಾಮಾನ್ಯವಾಗಿ ಅರವತ್ತರ ಬಳಿಕ ಕ್ಷೀಣಿಸತೊಡಗಲು ಇದೇ ಕಾರಣ. ಇದಕ್ಕೆ ಸಂಬಂಧಿಸಿದ ಕೆಲವಾರು ತೊಂದರೆಗಳು ಎದುರಾಗಲು ಈ ಕ್ರಿಯೆ ಸಮರ್ಪಕವಾಗಿ ನಿರ್ವಹಿಸದಿರುವುದೇ ಕಾರಣ. ಇದಕ್ಕೆ ಉತ್ತಮ ಉದಾಹರಣೆ abnormal protein aggregation ಎಂಬ ಕ್ರಿಯೆ. ಯಾವಾಗ ಆಟೋಫ್ಯಾಗಿ ಸಮರ್ಪಕವಾಗಿ ನಡೆಯುತ್ತದೆಯೋ ಆಗ ಈ ಕ್ರಿಯೆಯೂ ಸಹಜವಾಗಿ ನಿರ್ವಹಿಸುವ ಮೂಲಕ ಮೆದುಳಿನ ಜೀವಕೋಶಗಳು ಪರಿಪೂರ್ಣವಾಗಿ ಹೊಸದಾಗಿ ಹುಟ್ಟುತ್ತವೆ. ಹಾಗಾಗಿ, ವಾರದಲ್ಲಿ ಒಂದು ಅಥವಾ ಎರಡು ಬಾರಿ ನೀರಿನ ಉಪವಾಸ ನಿರ್ವಹಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಈ ಕ್ರಿಯೆಯನ್ನು ಕಿರಿದಾಗಿಸುವ, ಅಂದರೆ ಅರ್ಧ ದಿನ ಉಪವಾಸವಿರುವ ಮೂಲಕ ಪಡೆಯುವ ಪ್ರಯೋಜನಗಳ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯಬೇಕಾಗಿದ್ದು ಸಧ್ಯಕ್ಕೆ ಇದರಿಂದ ಅಷ್ಟೊಂದು ಉಪಯೋಗವಿಲ್ಲ ಎಂದೇ ಹೇಳಬಹುದು. ಅಂದ ಹಾಗೆ, ವಾರಕ್ಕೊಮ್ಮೆ ನೀರು ಕುಡಿದು ಉಪವಾಸವಿರುವುದು ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ವಿಧಾನವೇ ಆಗಿದ್ದು ಇದರ ಆರೋಗ್ಯಕರ ಪ್ರಯೋಜನವನ್ನು ಈಗ ವಿಜ್ಞಾನ ಪುಷ್ಟೀಕರಿಸುತ್ತಿದೆ.

  2. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

  ಕೇವಲ ನೀರನ್ನು ಕುಡಿಯುವುದರಿಂದ ದೇಹಕ್ಕೆ ಉಪ್ಪಿನ ಅಂಶ ದಾಖಲಾಗುವುದು ಇಲ್ಲವಾಗುತ್ತದೆ. ತನ್ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಈ ತೊಂದರೆಯಿಂದ ಬಳಲುವ ವ್ಯಕ್ತಿಗಳಿಗೆ ಹೆಚ್ಚಿನ ಔಷಧಿಯ ನೆರವಿಲ್ಲದೇ ಕೇವಲ ನೀರಿನ ಉಪವಾಸದ ಮೂಲಕ ಚಿಕಿತ್ಸೆ ಪಡೆಯಬೇಕಾದರೆ ಇದಕ್ಕೆ ವೈದ್ಯರ ನಿಗಾ ಅವಶ್ಯವಾಗಿದೆ.

  3. ಹೃದಯಸಂಬಂಧಿ ತೊಂದರೆಗಳು ಆವರಿಸುವ ಸಾಧ್ಯತೆ ತಗ್ಗಿಸುತ್ತದೆ.

  ನಿಯಮಿತವಾಗಿ ಅಥವಾ ಸಾಧ್ಯವಾದಾಗಲೆಲ್ಲಾ ನೀರಿನ ಉಪವಾಸ ಮಾಡುವ ಮೂಲಕ ದೇಹದಲ್ಲಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡುಗಳ ಮಟ್ಟ ಕಡಿಮೆಯಾಗಲು ಸಾಧ್ಯವಾಗುತ್ತದೆ. ಈ ಬಗ್ಗೆ ನಡೆಸಿದ ಪ್ರಾರಂಭಿದ ಸಂಶೋಧನೆಗಳಲ್ಲಿ ಕೇವಲ ಒಂದು ದಿನ ನಿರ್ವಹಿಸುವ ನೀರಿನ ಉಪವಾಸದಿಂದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡುಗಳು ತಗ್ಗಲು ಹಾಗೂ ವಿಶೇಷವಾಗಿ ಒಳ್ಳೆಯ ಕೊಲೆಸ್ಟಾಲ್ ಆದ HDL (high density lipoproteins) ಮಟ್ಟ ಹೆಚ್ಚಲು ನೆರವಾಗುತ್ತದೆ. ಆದರೆ ದೀರ್ಘಾವಧಿಯಲ್ಲಿ ಈ ಉಪವಾಸ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸಂಶೋಧನೆಗಳು ಮುಂದುವರೆದಿದ್ದು ವಿವರಗಳು ಇನ್ನಷ್ಟೇ ಬರಬೇಕಾಗಿವೆ.

  4. ಇನ್ಸುಲಿನ್ ಸಹಿಷ್ಟುತೆ ಹೆಚ್ಚುತ್ತದೆ

  ನಮ್ಮ ದೇಹದ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಇನ್ಸುಲಿನ್ ಅಗತ್ಯವಾಗಿದೆ ಮತ್ತು ಹಸಿವನ್ನು ಪ್ರೇರೇಪಿಸಲು ಲೆಪ್ಟಿನ್ ಎಂಬ ರಸದೂತ ಕಾರಣವಾಗಿದೆ. ಆಗಾಗ ನೀರಿನ ಉಪವಾಸ ಮಾಡುವ ಮೂಲಕ ದೇಹ ಇನ್ಸುಲಿನ್ ಸಹಿಸಿಕೊಳ್ಳುವ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಅಂದರೆ ರಕ್ತಕ್ಕೆ ಬಿಡುಗಡೆಯಾದ ಇನ್ಸುಲಿನ್ ಪ್ರಮಾಣದಲ್ಲಿ ಹೆಚ್ಚಿನಾಂಶ ಬಳಕೆಗೊಳ್ಳುತ್ತದೆ. ಇದು ಬಳಕೆಯಾಗದೇ ಇದ್ದಾಗ ಟೈಪ್ -2 ಮಧುಮೇಹ ಎದುರಾಗುತ್ತದೆ. ಆದರೆ ನೀರಿನ ಉಪವಾಸಕ್ಕೂ ರಕ್ತದಲ್ಲಿನ ಗ್ಲುಕೋಸ್ ಮಟ್ಟ ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ನಿಯಂತ್ರಣಗೊಳ್ಳುತ್ತದೆ ಎಂಬುದಕ್ಕೂ ನಿಕಟ ಸಂಬಂಧವನ್ನು ಸ್ಪಷ್ಟಪಡಿಸುವ ಯಾವುದೇ ಸಂಶೋಧನೆ ಇನ್ನೂ ಪ್ರಕಟಗೊಂಡಿಲ್ಲ. ಹಾಗಾಗಿ, ಮಧುಮೇಹಿಗಳು ತಮ್ಮ ಆರೋಗ್ಯ ಸುಧಾರಣೆಗಾಗಿ ನೀರಿನ ಉಪವಾಸವನ್ನು ಆಚರಿಸುವ ಮುನ್ನ ತಮ್ಮ ವೈದ್ಯರ ಸಲಹೆ ಪಡೆಯುವುದು ಅವಶ್ಯವಾಗಿದೆ.

  5. ಉತ್ಕರ್ಷಣ ಶೀಲ ಒತ್ತಡವನ್ನು (Oxidative Stress) ನಿವಾರಿಸುತ್ತದೆ

  reactive oxygen species (ROS) ಎಂಬ ಕಣಗಳು ದೇಹದಲ್ಲಿ ಸಂಗ್ರಹಗೊಂಡಷ್ಟೂ ಈ ಬಗೆಯ ಒತ್ತಡ ಹೆಚ್ಚುತ್ತದೆ. ಇದಕ್ಕೆ ಪ್ರಮುಖ ಕಾರಣ ಆಲಸಿತನ! ನಮ್ಮ ದೇಹದ ಎಲ್ಲಾ ಅಂಗಗಳಿಗೂ ಸತತವಾಗಿ ವ್ಯಾಯಾಮ ದೊರಕುತ್ತಲೇ ಇರಬೇಕು. ಹಾಗಾಗಿ ಚಲನಶೀಲತೆ ಕಡಿಮೆಯಿದ್ದಷ್ಟೂ ಈ ಬಗೆಯ ಒತ್ತಡ ಹೆಚ್ಚುತ್ತದೆ. ಈ ವ್ಯಕ್ತಿಗಳು ನೀರಿನ ಉಪವಾಸ ಆಚರಿಸುವ ಮೂಲಕ ಈ ಒತ್ತಡವನ್ನು ನಿವಾರಿಸಿಕೊಳ್ಳಬಹುದು. ತನ್ಮೂಲಕ ಎದುರಾಗಬಹುದಾಗಿದ್ದ ಉರಿಯೂತದಿಂದಲೂ ರಕ್ಷಣೆ ಪಡೆದಂತಾಗುತ್ತದೆ. ಒಂದು ಪ್ರಯೋಗದಲ್ಲಿ ಈ ಒತ್ತಡದಿಂದ ಬಳಲುತ್ತಿದ್ದ ಹನ್ನೊಂದು ವ್ಯಕ್ತಿಗಳು ನಿಯಮಿತವಾಗಿ ನೀರಿನ ಉಪವಾಸ ಆಚರಿಸಿದಾಗ ಇವರಲ್ಲಿ ಹತ್ತು ವ್ಯಕ್ತಿಗಳಲ್ಲಿ ಒತ್ತಡ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ.

  ಆದರೆ ನೀರಿನ ಉಪವಾಸದಿಂದ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ, ಕೆಲವು ಸಂದರ್ಭಗಳಲ್ಲಿ ನೀರಿನ ಉಪವಾಸದಿಂದ ಕೆಲವು ತೊಂದರೆಗಳೂ ಎದುರಾಗಬಹುದು. ಇವೆಂದರೆ:


 • ಅನಾರೋಗ್ಯಕರ ತೂಕದ ಇಳಿಕೆ:

  24-48 ಘಂಟೆಗಳ ಕಾಲ ನೀರಿನ ಉಪವಾಸ ಮಾಡಿದರೆ ಮೂರನೆಯ ದಿನ ಸುಮಾರು ಎರಡು ಕೇಜಿ ಇಳಿದಿರುವುದು ಕಂಡುಬರುತ್ತದೆ. ಆದರೆ ಇದು ಸಂತೋಷಪಡುವಂತಹ ಇಳಿಕೆಯಲ್ಲ, ಬದಲಿಗೆ ಆತಂಕಕಾರಿ ಇಳಿಕೆಯಾಗಿದೆ. ಏಕೆಂದರೆ ದೇಹದಲ್ಲಿರುವ ಸ್ನಾಯುಗಳಲ್ಲಿ ನೀರಿನಂಶ ಕಡಿಮೆಯಾಗಿದ್ದು ಕಾರ್ಬೋಹೈಡ್ರೇಟುಗಳೂ ಇಲ್ಲವಾದ ಕಾರಣ ಈ ಇಳಿಕೆ ಕಂಡುಬಂದಿದೆಯೇ ಹೊರತು ಕೊಬ್ಬು ಕರಗಿ ಅಲ್ಲ! ಮುಂದಿನ ದಿನ ನೀವು ಆಹಾರ ತೆಗೆದುಕೊಳ್ಳಲು ಪ್ರಾರಂಭಿಸಿದ ತಕ್ಷಣವೇ ಇದು ಮತ್ತೆ ಕಾರ್ಬೋಹೈಡ್ರೇಟುಗಳಿಂದ ತುಂಬಿಕೊಂಡು ಇಳಿದಿದ್ದ ತೂಕ ತಕ್ಷಣವೇ ಏರುತ್ತದೆ. ಹಾಗಾಗಿ ಥಟ್ಟನೇ ತೂಕ ಇಳಿಸುವ ನಿಟ್ಟಿನಲ್ಲಿ ನಡೆಸುವ ಉಪವಾಸ ಅಪಾಯಕಾರಿ!

  * ಪೋಷಕಾಂಶಗಳ ಕೊರತೆ: ನಾವು ಆಹಾರವಿಲ್ಲದೇ ನಾಲ್ಕಾರು ದಿನ ಬದುಕಬಲ್ಲೆವು, ನೀರಿಲ್ಲದೆ ಒಂದು ದಿನ ಮಾತ್ರ ಬದುಕಿರಬಹುದು. ಈ ಮೂಲಕ ನಮ್ಮ ಆರೋಗ್ಯಕ್ಕೆ ಪೋಷಕಾಂಶಗಳು ಮತ್ತು ನೀರನ್ನು ಸತತವಾಗಿ ಒದಗಿಸುತ್ತಿರುವ ಮಹತ್ವವನ್ನು ಅರಿಯಬಹುದು. ಆದರೆ ಒಂದು ವೇಳೆ ಸತತ ಮೂರು ದಿನಗಳವರೆಗೆ ನೀರಿನ ಉಪವಾಸ ಮಾಡಿದರೆ ಈ ಅವಧಿಯಲ್ಲಿ ದೊರಕಬೇಕಾಗಿದ್ದ ಪೋಷಕಾಂಶಗಳು ದೊರಕದೇ ದೇಹಕ್ಕೆ ಇವುಗಳ ಕೊರತೆ ಎದುರಾಗಬಹುದು.

  * ನಿರ್ಜಲೀಕರಣ: ನೀರು ಕುಡಿಯುತ್ತಿದ್ದರೂ ನಿರ್ಜಲೀಕರಣವಾಗುವುದು ಹೇಗೆ? ವಾಸ್ತವದಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ನೀರಿನ ಪ್ರಮಾಣವೆಲ್ಲಾ ಕುಡಿಯುವ ನೀರಿನಿಂದಲೇ ದೊರಕುವುದಿಲ್ಲ. ಬದಲಿಗೆ 20% ರಷ್ಟು ನೀರನ್ನು ನಮ್ಮ ಆಹಾರದಿಂದ ಪಡೆಯುತ್ತದೆ. ಈ ನೀರು ಅಂಗಾಂಶ ಮತ್ತು ಜೀವಕೋಶಗಳು ಹಿಡಿದಿಟ್ಟುಕೊಳ್ಳಲು ಅಗತ್ಯವಾಗಿದೆ. ನಾವು ಕುಡಿಯುವ ನೀರು ಅಗತ್ಯಕ್ಕೂ ಹೆಚ್ಚಾದರೆ ಮೂತ್ರದ ಮೂಲಕ ಹೊರಹೋಗುತ್ತದೆ. ಹಾಗಾಗಿ ಆಹಾರವಿಲ್ಲದೇ ಕೇವಲ ನೀರು ಕುಡಿಯುತ್ತಿದ್ದರೆ ಆಹಾರದಿಂದ ಲಭಿಸಬೇಕಾಗಿದ್ದ ನೀರಿನಂಶ ಇಲ್ಲವಾಗಿ ನಿರ್ಜಲೀಕರಣ ಎದುರಾಗುತ್ತದೆ.

  * ಥಟ್ಟನೇ ಎದ್ದುನಿಂತಾಗ ಎದುರಾಗುವ ಕಡಿಮೆ ರಕ್ತದೊತ್ತಡ ( Orthostatic Hypotension)
  ಒಂದು ವೇಳೆ ಅತಿ ಹೊತ್ತು ಉಪವಾಸ ಆಚರಿಸುತ್ತಿದ್ದರೆ ಈ ವ್ಯಕ್ತಿಗಳು ಮಲಗಿದ್ದಲ್ಲಿಂದ ಥಟ್ಟನೇ ಎದ್ದು ನಿಂತರೆ ಇವರಿಗೆ ತಕ್ಷಣವೇ ಕಡಿಮೆ ರಕ್ತದೊತ್ತಡ ಎದುರಾಗಿ ತಲೆಸುತ್ತು ಬರುತ್ತದೆ. ಸಾಮಾನ್ಯವಾಗಿ ಸಂಕುಚನದ ಒತ್ತಡ (systolic blood pressure) 20 mmHg ಮತ್ತು ವಿಕಸನದ ಒತ್ತಡ (diastolic blood pressure) 10 mmHg ಯಷ್ಟು ಕಡಿಮೆಯಾಗುತ್ತದೆ.

  ನಿಶ್ಯಕ್ತಿ: ನೀರಿನ ಉಪವಾಸದ ಅವಧಿಯಲ್ಲಿ ನಮ್ಮ ದೇಹ ಪೋಷಕಾಂಶಗಳ ತೀವ್ರ ಆಭಾವವನ್ನು ಎದುರಿಸುತ್ತದೆ. ಪರಿಣಾಮವಾಗಿ ತಲೆಸುತ್ತುವಿಕೆ, ಸುಸ್ತು ಮತ್ತು ಮೆದುಳಿನ ಕ್ಷಮತೆ ಕ್ಷೀಣಿಸುವುದು(brain fogging) ಕಂಡುಬರಬಹುದು. ನಮ್ಮ ಮೆದುಳಿಗೆ ಸತತವಾಗಿ ರಕ್ತಪೂರೈಕೆಯಾಗುತ್ತಿರಬೇಕು ಹಾಗೂ ಪೋಷಕಾಂಶಗಳೂ ವಿತರಿಸುತ್ತಲೇ ಇರಬೇಕು. ಇದು ಇಲ್ಲವಾದರೆ ಈ ತೊಂದರೆಗಳ ಸಹಿತ ಏಕಾಗ್ರತೆ ಮತ್ತು ಗಮನ ಹರಿಸುವಿಕೆಯೂ ಸಾಧ್ಯವಾಗದೇ ಹೋಗಬಹುದು.

  * ಉಪವಾಸದ ಬಳಿಕ ಹೆಚ್ಚುವ ಆಹಾರಪ್ರಮಾಣ: ಸಾಮಾನ್ಯವಾಗಿ ಆಹಾರಸೇವನೆ ನಮ್ಮ ಮೆದುಳಿನ ಆಯ್ಕೆಯ ಪ್ರಕಾರವೇ ನಡೆಯುತ್ತದೆಯೇ ಹೊರತು ಹೊಟ್ಟೆಯ ಅಗತ್ಯತೆಯಂತಲ್ಲ. ಇದೇ ಕಾರಣಕ್ಕೆ ಆಹಾರವಸ್ತುಗಳನ್ನು ರುಚಿಕರವಾಗಿಸುವುದಕ್ಕಿಂತಲೂ ಅಂದವಾಗಿಸುವತ್ತಲೇ ಹೆಚ್ಚಿನ ಶ್ರಮ ವಹಿಸಲಾಗುತ್ತದೆ. ನೀರಿನ ಉಪವಾಸದ ಬಳಿಕ ದೇಹದಲ್ಲಿ ಉಂಟಾಗಿರುವ ಕ್ಯಾಲೋರಿಗಳ ಕೊರತೆಯನ್ನು ಮೆದುಳು ಅಪಾರ ಹಸಿವಿನ ರೂಪದಲ್ಲಿ ಪ್ರಕಟಿಸುವುದರಿಂದ ಉಪವಾಸದಿಂದ ಕಳೆದುಕೊಂಡಿದ್ದಕ್ಕೂ ಹೆಚ್ಚಿನ ಆಹಾರವನ್ನು ಸೇವಿಸುವಂತೆ ಪ್ರಚೋದನೆ ನೀಡುತ್ತದೆ.


 • ಈಗಿರುವ ಕೆಲವು ಕಾಯಿಲೆಗಳನ್ನು ಉಲ್ಬಣಿಸಬಹುದು:

  ಒಂದು ವೇಳೆ ನಿಮಗೇನಾದರೂ ಕಾಯಿಲೆ ಇದ್ದರೆ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಉಪವಾಸಗಳು ಇದರ ಮೇಲೆ ಪರಿಣಾಮ ಬೀರಬಹುದು. ಒಂದು ವೇಳೆ ಉಪವಾಸದಿಂದ ಇನ್ಸುಲಿನ್ ಪ್ರಮಾಣದಲ್ಲಿ ಥಟ್ಟನೇ ಇಳಿಕೆಯಾದರೆ ಇದು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋಗಬಹುದು. ಹಾಗಾಗಿ ಮಧುಮೇಹಿಗಳಿಗೆ ಉಪವಾಸ ಸಲ್ಲದು. ಅಲ್ಲದೇ ಉಪವಾದದಿಂದ ದೇಹದಲ್ಲಿ ಯೂರಿಕ್ ಆಮ್ಲದ ಸಂಗ್ರಹ ಹೆಚ್ಚುತ್ತದೆ (ಇದಕ್ಕೆ ವೈದ್ಯಕೀಯವಾಗಿ gout ಎಂದು ಕರೆಯುತ್ತಾರೆ). ಖಾಲಿಯಾದ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚುವ ಕಾರಣ ಎದೆಯುರಿಯೂ ಉಂಟಾಗಬಹುದು.

  ಹಾಗಾಗಿ, ನೀರಿನ ಉಪವಾಸವನ್ನು ಸರಿಯಾದ ಕ್ರಮದಲ್ಲಿ ಅನುಸರಿಸದೇ ಇದ್ದರೆ ಇದು ಆರೋಗ್ಯಕ್ಕೆ ಒಳ್ಳೆಯದು ಮಾಡುವುದಕ್ಕಿಂತಲೂ ಹೆಚ್ಚಾಗಿ ಹಾನಿಯುಂಟುಮಾಡಬಹುದು.


 • ಹಾಗಾದರೆ ಸರಿಯಾದ ಕ್ರಮ ಯಾವುದು?

  ಇದಕ್ಕೆ ಎರಡು ಹಂತಗಳಿವೆ:
  24-72 ಘಂಟೆಗಳ ನೀರಿನ ಉಪವಾಸ
  1-3 ದಿವಸಗಳ ಉಪವಾಸದ ಬಳಿಕದ ಆಹಾರಕ್ರಮ:

  ಮೊದಲ ಹಂತದಲ್ಲಿ ನೀವು ಕೇವಲ ನೀರನ್ನು ಮಾತ್ರವೇ ಕುಡಿಯಬೇಕು, ಬೇರೇನನ್ನೂ ಸೇವಿಸಬಾರದು. ಹಣ್ಣಿನ ರಸ, ಟೀ, ಮದ್ಯವಲ್ಲದ ಪೇಯ ಮೊದಲಾದವು ಯಾವುದೇ ಪಾನೀಯಗಳಿಗೆ ಅವಕಾಶವಿಲ್ಲ. ಆಗಾಗ ಸಾಕಷ್ಟು ಪ್ರಮಾಣದಲ್ಲಿ ನೀರನ್ನೇ ಕುಡಿಯುತ್ತಿರಬೇಕು.
  ಆದರೆ ನೀವಿದನ್ನು ಮೊದಲ ಬಾರಿಗೆ ಪ್ರಯತ್ನಿಸುವುದಾದರೆ ಹೀಗೆ ಮಾಡಿ:
  * ಮೊದಲ ನಾಲ್ಕು ಘಂಟೆಗಳ ಕಾಲ ಆಹಾರವಿಲ್ಲದೇ ಇರಲು ಯತ್ನಿಸಿ. ಬೆಳಿಗ್ಗೆ ಎಂಟು ಘಂಟೆಗೆ ಕೊಂಚ ಹೆಚ್ಚೇ ಉಪಾಹಾರ ಸೇವಿಸಿ ಹನ್ನೆರಡು ಘಂಟೆಯವರೆಗೆ ಏನನ್ನೂ ಸೇವಿಸದೇ ಬಳಿಕ ಅಹಾರ ಸೇವಿಸಿ.
  * ಈ ಕ್ರಮವನ್ನು ನಿಧಾನವಾಗಿ ಹೆಚ್ಚಿಸುತ್ತಾ ಎಂಟು ಘಂಟೆಗಳಿಗೆ ವಿಸ್ತರಿಸಿ.
  * ಮುಸ್ಲಿಮರು ಅನುಸರಿಸುವ ರಮಧಾನ್ (ರಂಜಾನ್) ಉಪವಾಸವನ್ನು ಅನುಸರಿಸಿ. ಸೂರ್ಯೋದಯಕ್ಕೂ ಮುನ್ನ ಪ್ರೋಟೀನ್, ಕರಗದ ನಾರು ಮತ್ತು ಆರೋಗ್ಯಕರ ಕೊಬ್ಬು ಇರುವ ಅಹಾರ ಸೇವಿಸಿ ಬಳಿಕ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಉಪಾಹಾರ ಸೇವಿಸಿ.
  * ಸಾಧ್ಯವಾದರೆ ಈ ಅವಧಿಯನ್ನು ಇಪ್ಪತ್ತನಾಲ್ಕು ಘಂಟೆಗಳಿಗೆ ವಿಸ್ತರಿಸಿ.
  * ವಾರದಲ್ಲಿ ಕೇವಲ ಒಂದು ಅಥವಾ ಎರಡು ದಿನ ಮಾತ್ರ ಅನುಸರಿಸಿ.


 • ಎರಡನೆಯ ಹಂತದಲ್ಲಿ ಮಾನಸಿಕ ಸಾಮರ್ಥಕ್ಕೆ ಹೆಚ್ಚು ಮಹತ್ವವಿದೆ.

  ಉಪವಾಸದ ಬಳಿಕ ಮನ ಹೆಚ್ಚು ಆಹಾರ ತಿನ್ನುವಂತೆ ಪ್ರೇರೇಪಿಸುತ್ತದೆ. ಹಾಗಾಗಿ ಉಪವಾಸದ ಬಳಿಕ ಭಾರೀ ಪ್ರಮಾಣದ ಆಹಾರವನ್ನು ಸೇವಿಸದಿರಿ. ಈ ಅವಧಿಯಲ್ಲಿ ಸೇವಿಸುವ ಆಹಾರ ಮಿತವಾಗಿದ್ದು ಸಾಕಷ್ಟು ಪೌಷ್ಟಿಕಾಂಶಗಳನ್ನು ಹೊಂದಿರಬೇಕು. ಕೊಂಚ ಒಣಫಲಗಳು, ಆರೋಗ್ಯಕರ ಹಣ್ಣಿನ ರಸಗಳು ಅಥವಾ ಸ್ಮೂಥಿಗಳಿರಲಿ.
  * ಸ್ನಾಯುಗಳು ಕಳೆದುಕೊಂಡಿದ್ದ ಶಕ್ತಿಯನ್ನು ಮರುದುಂಬಿಸಲು ಇಡಿಯ ಧಾನ್ಯ ಮತ್ತು ಪ್ರೋಟೀನುಗಳಿರುವ ಅಹಾರ ಸೇವಿಸಿ.
  * ಒಣಫಲ ಮತ್ತು ಒಮೆಗಾ 3 ಕೊಬ್ಬಿನ ಆಮ್ಲಗಳಿರುವ ಆಹಾರ ಸೇವಿಸಿ
  * ಹುರಿದ, ಕರಿದ ಅಥವಾ ಸಿದ್ಧ ಆಹಾರಗಳಿಗೆ ಒಲವು ತೋರದಿರಿ.

  ಆದರೂ, ಈ ವಿಧಾನ ಎಷ್ಟರ ಮಟ್ಟಿಗೆ ಫಲಕಾರಿ ಎಂಬುದರ ಬಗ್ಗೆ ಇನ್ನೂ ಸಂಶೋಧನೆಗಳು ಮುಂದುವರೆಯುತ್ತಿವೆ. ಹಾಗಾಗಿ, ಈ ವಿಧಾನವನ್ನು ಅನುಸರಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯಿರಿ.
ಉಪವಾಸ, ಬಹುತೇಕ ಎಲ್ಲಾ ಧರ್ಮಗಳೂ ಅನುಸರಿಸಿಕೊಂಡು ಬರುತ್ತಿರುವ ಕ್ರಮವಾಗಿದ್ದು ಇದು ದೇಹವನ್ನು ಆರೋಗ್ಯಕರವಾಗಿರಿಸಲು ಮತ್ತು ನವಚೈತನ್ಯ ನೀಡಲು ನೆರವಾಗುತ್ತದೆ. ಕೇವಲ ದೇಹ ಮಾತ್ರವಲ್ಲ, ಮನಸ್ಸು ಸಹಾ ಪ್ರಫುಲ್ಲಗೊಳ್ಳುತ್ತದೆ. ಸಾಮಾನ್ಯವಾಗಿ ಉಪವಾಸವೆಂದರೆ ಏನನ್ನೂ ತೆಗೆದುಕೊಳ್ಳದೆಯೇ ಕೊಂಚ ಕಾಲ ಹಾಗೆ ಬಿಟ್ಟು ಜೀರ್ಣಾಂಗಗಳಿಗೆ ವಿಶ್ರಾಂತಿ ನೀಡುವ ಕ್ರಿಯೆಯಾಗಿದೆ. ಈ ಮೂಲಕ ಸತತ ಕಾರ್ಯನಿರ್ವಹಿಸುತ್ತಿದ್ದ ಜೀರ್ಣಾಂಗಗಳಿಗೆ ಇತರ ಕೆಲಸಗಳಾದ ಕಲ್ಮಶಗಳನ್ನು ಪರಿಪೂರ್ಣವಾಗಿ ಹೊರಹಾಕಲು ಮತ್ತು ಚಿಕ್ಕ ಪುಟ್ಟ ಗಾಯಗಳನ್ನು ಮಾಗಿಸಿ ಹೊಸ ಪದರಗಳನ್ನು ಹೊಂದಲು ಸಾಧ್ಯವಾಗುತ್ತದೆ.

ಉಪವಾಸ ಎಂದಾಕ್ಷಣ ಒಂದಿಡೀ ದಿವಸ ನೀರು ಆಹಾರ ಇಲ್ಲದೆ ಇರುವುದು ಎಂದರ್ಥವಲ್ಲ. ಬದಲಿಗೆ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಸಹಾ ಉಪವಾಸವೇ. ಗಾಂಧೀಜಿ ನಿರ್ವಹಿಸುತ್ತಿದ್ದ ಉಪವಾಸ ಈ ಕ್ರಮದ್ದಾಗಿದೆ. ಒಂದು ವೇಳೆ ಕ್ಯಾಲೋರಿಗಳಿಲ್ಲದ ಆಹಾರವನ್ನು ಮಾತ್ರವೇ ತೆಗೆದುಕೊಂಡರೆ? ಇದುವೇ ನೀರಿನ ಉಪವಾಸ. ಅಂದರೆ ಇಡೀ ದಿನ ಕೇವಲ ನೀರನ್ನು ಬಿಟ್ಟು ಬೇರೇನನ್ನೂ ಸೇವಿಸದಿರುವುದು.

ಸಾಮಾನ್ಯವಾಗಿ ಕೇವಲ ನೀರನ್ನೇ ಸೇವಿಸುವ ಮೂಲಕ 24 ರಿಂದ 26 ಗಂಟೆಗಾಲ ಕಾಲ ನಮ್ಮ ದೇಹ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ. ಆದರೆ ಇದಕ್ಕೂ ಹೆಚ್ಚಿನ ಅವಧಿಗೆ ಉಪವಾಸ ಮುಂದುವರಿಸಲು ವೈದ್ಯರ ಸಲಹೆ ಅಗತ್ಯವಾಗಿದೆ.

ನೀರಿನ ಉಪವಾಸದಿಂದ ಏನು ಉಪಯೋಗ, ಹೇಗೆ ನಿರ್ವಹಿಸುವುದು ಹಾಗೂ ಕೈಗೊಳ್ಳಬೇಕಾದ ಮುನ್ನೆಡಚ್ಚರಿಕೆಗಳ ಬಗ್ಗೆ ಇಂದಿನ ಲೇಖನದಲ್ಲಿ ಮಹತ್ವದ ಮಾಹಿತಿಗಳನ್ನು ಒದಗಿಸಲಾಗಿದೆ. ಬನ್ನಿ ನೋಡೋಣ:

 
ಹೆಲ್ತ್