Back
Home » ಸುದ್ದಿ
ಬೇಹುಗಾರಿಕೆ ಆರೋಪ ಮುಕ್ತ ವಿಜ್ಞಾನಿಗೆ 1.3 ಕೋಟಿ ರು ಪರಿಹಾರ
Oneindia | 12th Aug, 2020 02:11 PM

ತಿರುವನಂತಪುರಂ, ಆ.12: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಹೆಮ್ಮೆಯ ವಿಜ್ಞಾನಿ ನಂಬಿ ನಾರಾಯಣನ್ ಅವರ ವಿರುದ್ಧ ಬೇಹುಗಾರಿಕೆ ಆರೋಪ ಹೊರೆಸಲಾಗಿತ್ತು. ತಮ್ಮ ವಿರುದ್ಧ ಸಂಚು ನಡೆಸಲಾಗಿದೆ ಎಂದು ಆರೋಪದ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು. ಸುಪ್ರೀಂಕೋರ್ಟ್ ವಿಜ್ಞಾನಿಯು ನಿರ್ದೋಷಿ ಎಂದು ಘೋಷಿಸಿತ್ತು.

ಕಾನೂನು ಸಮರ ನಡೆಸಿದ್ದ ವಯೋವೃದ್ಧ, ಜ್ಞಾನವೃದ್ಧ ನಾರಾಯಣನ್ ಅವರ ಮೇಲೆ ಸುಳ್ಳು ಆರೋಪ ಹೊರೆಸಿದ ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿತ್ತು. ವಿಶ್ರಾಂತ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ 1.3 ಕೋಟಿ ರು ಪರಿಹಾರ ಮೊತ್ತವನ್ನು ನೀಡಲು ಸೂಚಿಸಿತ್ತು.

ನವ ಭಾರತದ ನಿರ್ಮಾರ್ತೃಗಳು: ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಸ್ರೋ

ಕೇರಳ ಸಚಿವ ಸಂಪುಟ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ 1.3 ಕೋಟಿ ರೂಪಾಯಿ ಪರಿಹಾರ ನೀಡಲು 2019 ಡಿ.27ರಂದು ತಾತ್ವಿಕ ಒಪ್ಪಿಗೆ ನೀಡಿತು. ಈ ಮೊತ್ತ ಮಂಗಳವಾರ( ಆ.12, 2020)ರಂದು ನಾರಾಯಣನ್ ಅವರ ಖಾತೆಗೆ ಸಂದಾಯವಾಗಿದೆ.

ಇದಕ್ಕೂ ಮುನ್ನ ಸುಪ್ರೀಂಕೋರ್ಟ್ ಆದೇಶದಂತೆ 50 ಲಕ್ಷ ರು ಹಾಗೂ ಮಾನವ ಹಕ್ಕುಗಳ ಆಯೋಗದಿಂದ ಶಿಫಾರಸ್ಸಿನಂತೆ 10 ಲಕ್ಷ ರು ಸಂದಾಯವಾಗಿದೆ.

ದೇಶಿ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಂಬಿ ನಾರಾಯಣನ್ ಅವರು ಇಸ್ರೋದ ಗೌಪ್ಯ ದಾಖಲೆ, ಸೂಕ್ಷ್ಮ ಮಾಹಿತಿ, ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಿದ್ದಾರೆ. ಮಾಲ್ಡೀವ್ಸ್ ಮಹಿಳೆಯ ನೆರವು ಪಡೆದುಕೊಂಡಿದ್ದರು ಎಂದು ಆರೋಪಿಸಲಾಗಿತ್ತು. 1994ರಲ್ಲಿ ವಿಜ್ಞಾನಿ ನಂಬಿ ಅವರನ್ನು ಬಂಧಿಸಲಾಗಿತ್ತು.

1998 ರಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣವನ್ನೇ ವಜಾಗೊಳಿಸಿ ತೀರ್ಪು ನೀಡಿತು. ಆ ಬಳಿಕ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನಂಬಿ ನಾರಾಯಣನ್ ಅವರ ವೃತ್ತಿ ಜೀವನಕ್ಕೆ ಅನ್ಯಾಯವಾಗಿ ಕಲ್ಲು ಹಾಕಿದ್ದಕ್ಕಾಗಿ ಕೇರಳ ಸರ್ಕಾರಕ್ಕೆ ಛೀಮಾರಿ ಹಾಕಿ ಪರಿಹಾರ ನೀಡುವಂತೆ ಆದೇಶ ನೀಡಿತು. ಕೇರಳ ಸರ್ಕಾರ ನಂಬಿಯವರಿಗೆ 10 ಲಕ್ಷ ರೂ. ಪರಿಹಾರ ಕೊಡುವಂತೆ ಕೇರಳ ಹೈಕೋರ್ಟ್ ಇದೇ ಸಂದರ್ಭದಲ್ಲಿ ಸೂಚಿಸಿತು. ಐಬಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆಯೂ ಅದು ಹೇಳಿತ್ತು. ಅಲ್ಲಿಗೆ ನಂಬಿ ನಾರಾಯಣನ್ ನಿರ್ದೋಷಿ ಎಂಬುದು ಸಂಪೂರ್ಣ ಸಾಬೀತಾಗಿತ್ತು..ಆದರೆ ನಂಬಿಯವರ ಜೀವನ, ಉಳಿದ ಹದಿಮೂರು ವರ್ಷದ ಇಸ್ರೋ ಸೇವೆ ಹಾಳಾಯಿತು. 2018ರಲ್ಲಿ ಮತ್ತೊಮ್ಮೆ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತೀರ್ಪು ನೀಡಿ ನಾರಾಯಣನ್ ಅವರು ನಿರಪರಾಧಿ ಎಂದು ಘೋಷಿಸಿತು.

"ಭಾರತ ತನ್ನದೇ ಆದ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸಬಾರದೆಂದೇ ಅಮೆರಿಕ ರಷ್ಯಾದ ಮೇಲೆ ಒತ್ತಡ ಹೇರಿತ್ತು. ಇಸ್ರೊ ವಿಜ್ಞಾನಿಗಳ ನೈತಿಕ ಸ್ಥೈರ್ಯವನ್ನು ಉಡುಗಿಸಲೆಂದೇ ಬೇಹುಗಾರಿಕಾ ಪ್ರಕರಣವನ್ನು ಸೃಷ್ಟಿಸಲಾಯಿತು'' ಎಂದು ನಂಬಿ ನಾರಾಯಣನ್ ದುಃಖದಿಂದ ಹೇಳಿಕೊಂಡಿದ್ದರು.

ನಂಬಿ ನಾರಾಯಣನ್ ಅವರ ಪರಿಶ್ರಮದಿಂದಾಗಿ ಭಾರತ ಈಗ ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿರುವುದು ಹೆಗ್ಗಳಿಕೆಯ ವಿಚಾರ.ಅಣು ಬಾಂಬನ್ನು ದೂರ ಸಾಗಿಸಲು ಈ ತಂತ್ರ ಜ್ಞಾನ ಅಗತ್ಯ. ಆದರೆ ಈ ತಂತ್ರಜ್ಞಾನವನ್ನು ಉತ್ತಮ ಉದ್ದೇಶಗಳಿಗೆ ಹೇಗೆ ಬಳಸಬಹುದು ಎಂಬುದನ್ನು ಭಾರತ ಈಗ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಅಷ್ಟೇ ಅಲ್ಲ, ಕಡಿಮೆ ವೆಚ್ಚದಲ್ಲಿ ಅದನ್ನು ಹೇಗೆ ಸಾಧಿಸಬಹುದು ಎಂಬುದು ಮಾದರಿಯಾಗಿದೆ.

 
ಹೆಲ್ತ್