Back
Home » ಸುದ್ದಿ
ಬೆಂಗಳೂರು ಗಲಭೆ ಹಿಂದಿನ ಕಾರಣ ಇದು?
Oneindia | 12th Aug, 2020 02:06 PM
 • ಮೊದಲ ಗಲಭೆ

  ಕೊರೊನಾ ವೈರಸ್ ಸೋಂಕಿತರನ್ನು ಕ್ವಾರಂಟೈನ್‌ಗೆ ಕರೆದೊಯ್ಯುವಾಗ ಪೊಲೀಸರು, ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿ ಮೇಲೆ ಹಲ್ಲೆಯಾಗಿತ್ತು. ಆಗ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಖಡಕ್ ಎಚ್ಚರಿಕೆ ಸಂದೇಶವನ್ನು ಕೊಟ್ಟಿದ್ದರು. ಇನ್ನುಮುಂದೆ ಯಾರೂ ಕೂಡ ಕಾನೂನು ಕೈಗೆ ತೆಗೆದುಕೊಳ್ಳಲು ಮುಂದಾಗಬಾರದು. ಅಂತಹ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ. ಜೊತೆಗೆ ವಿಪತ್ತು ನಿರ್ವಹಣೆ ಕಾಯ್ದೆಯಡಿಯೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಖಡಕ್ ಎಚ್ಚರಿಕೆ ಕೊಟ್ಟಿತ್ತು.

  ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ: ಗೃಹ ಸಚಿವರು ಹೇಳುವುದೇನು?

  ಆದರೆ ಪೊಲೀಸರು ಹಾಗೂ ಇತರ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರು ನಂತರ ಜಾಮೀನಿನ ಮೇಲೆ ಬಿಡುಗಡೆ ಆದರು. ಬಿಡುಗಡೆ ಆದ ಬಳಿಕ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಹಾಗೂ ಕೆಲವು ಭಾಗಗಳಲ್ಲಿ ರಾತ್ರಿ ಕರ್ಫ್ಯೂ ಇದ್ದರೂ ಪೊಲೀಸರ ಎದುರೆ ಬೃಹತ್ ಬೈಕ್ ರ್ಯಾಲಿ ಮಾಡಲಾಗಿತ್ತು. ಅದು ಪೊಲೀಸರ ಆತ್ಮಸ್ಥೈರ್ಯವನ್ನೇ ಕೆಡಿಸುವಂತಹ ಘಟನೆಯಾಗಿತ್ತು. ಆದರೂ ಸರ್ಕಾರ ಮಾತ್ರ ಎಚ್ಚೆತ್ತುಕೊಳ್ಳಲಿಲ್ಲ. ಅದರಿಂದಾಗಿ ದುಷ್ಕರ್ಮಿಗಳಿಗೆ ಪೊಲೀಸರ ಮೇಲಿನ ಭಯವೇ ಇಲ್ಲದಂತಾಗಿದೆ ಎಂಬಂತೆ ಈಗ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸ್ ವಾಹನಗಳನ್ನು ಸುಟ್ಟು ಹಾಕಿದ್ದಾರೆ.


 • ರಾಮ ಮಂದಿರ ವಿಷಯ

  ರಾಮ ಮಂದಿರ ನಿರ್ಮಾಣ ಶಾಂತಿಯುತವಾಗಿ ನಡೆದ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಸಲಾಗಿದೆ ಎಂಬ ಆರೋವನ್ನು ಸ್ವತಃ ಬಿಜೆಪಿ ನಾಯಕರೇ ಇದೀಗ ಮಾಡುತ್ತಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಸೂಕ್ಷ್ಮವಿಚಾರವಾಗಿದ್ದರೂ ಗುಪ್ತಚರ ಇಲಾಖೆ ಮೈರೆತಿತಾ ಎಂಬ ಪ್ರಶ್ನೆಯೂ ಮೂಡುತ್ತಿದೆ. ಸುಮಾರು 2 ಸಾವಿರ ಜನರು ಏಕಾಏಕಿ ಎಲ್ಲಿಂದ, ಹೇಗೆ ಸೇರಿದರು ಎಂಬುದು ನಿಗೂಢವಾಗಿದೆ. ಪೊಲೀಸ್ ಇಲಾಖೆ ಕೂಡ ಇದೀಗ ತನಿಖೆ ನಡೆಸಿದೆ.

  ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯ ಗಲಭೆ ಹಿಂದೆ ಎದ್ದು ಕಾಣುತ್ತಿದೆ. ಸುಮಾರು ಎರಡು ಸಾವಿರದಷ್ಟು ಜನರು ಸೇರಿದ್ದು ಗುಪ್ತಚರ ಇಲಾಖೆಯ ಗಮನಕ್ಕೆ ಬರದೇ ಇರುವುದು ಆಶ್ಚರ್ಯ ಮೂಡಿಸಿದೆ.


 • ಫೀಲ್ಡಿಗಿಳಿದ ಅಧಿಕಾರಿಗಳು

  ಬೆಂಗಳೂರಿನಲ್ಲಿ ಆರು ತಿಂಗಳುಗಳಲ್ಲಿ ಎರಡನೇ ಬಾರಿ ಆತಂದಕ ಸ್ಥಿತಿ ನಿರ್ಮಾಣವಾದ ಬಳಿಕ ಇದೀಗ ಸಿಸಿಬಿ, ಸಿಐಡಿ ಇನ್ಸ್‌ಫೆಕ್ಟರ್‌ಗಳನ್ನು ಸರ್ಕಾರ ಕಾರ್ಯಾಚರಣೆಗೆ ಇಳಿಸಿದೆ. ಈ ಹಿಂದೆ ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸಹಾಯ ಪಡೆಯಲು ಗೃಹ ಇಲಾಖೆ ತೀರ್ಮಾನಿಸಿದೆ. ಬೆಂಗಳೂರು ಪೂರ್ವ ವಿಭಾಗ, ಆಗ್ನೆಯ ವಿಭಾಗ, ಉತ್ತರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಫೀಲ್ಡ್‌ಗೆ ಇಳಿದಿದ್ದಾರೆ. ಅಲ್ಲಿನ ಆರೋಪಿಗಳ ಬಗ್ಗೆ ಈ ಹಿಂದೆ ಮಾಹಿತಿ ಹೊಂದಿರುವ ಇನ್ಸ್‌ಪೆಕ್ಟರ್‌ಗಳನ್ನು ಅನುಭವ ಬಳಸಿಕೊಂಡು ಮತ್ತಷ್ಟು ಆರೋಪಿಗಳನ್ನ ಪತ್ತೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.

  ಬೆಂಗಳೂರು: ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ದಾಂಧಲೆಯ ಹಿಂದು-ಮುಂದು


 • ಗಲಭೆ ಹಿಂದಿನ ಕಾರಣ

  ಬೆಂಗಳೂರಿನಲ್ಲಿ ನಿರ್ಮಾಣವಾಗುವ ಆತಂಕದ ಸ್ಥಿತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಭಯವನ್ನುಂಟು ಮಾಡುವುದು ಕೆಲ ಸಂಘಟನೆಗಳ ಪ್ರಯತ್ನ. ಹೀಗಾಗಿ ಸ್ಥಳೀಯರನ್ನು ಪ್ರಚೋದಿಸಿ ಗಲಭೆ ಸೃಷ್ಟಿಸಿರುವ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ ಎಂಬ ಮಾಹಿತಿಯಿದೆ. ಏನೇ ಇರಲಿ, ಸ್ಥಳೀಯ ಕಾನೂನಿಗೆ ಗೌರವ ಕೊಡುವಂತೆ ಮಾಡುವ ಬಹುದೊಡ್ಡ ಜವಾಬ್ದಾರಿ ಸರ್ಕಾರ ಹಾಗೂ ರಾಜ್ಯ ಗೃಹ ಇಲಾಖೆಯ ಮೇಲಿದೆ. ಮೊದಲೇ ಕೊರೊನಾ ವೈರಸ್‌ನಿಂದ ರಾಜ್ಯದ ಆರ್ಥಿಕತೆ ಮುಗ್ಗರಿಸಿದೆ. ಇದೇ ಕಠಿಣ ಸಮಯವನ್ನು ದುಷ್ಟಶಕ್ತಿಗಳು ಬಳಸಿಕೊಳ್ಳಲು ಸರ್ಕಾರ ಅವಕಾಶ ಕೊಡದಂತೆ ಕಾರ್ಯನಿರ್ವಹಿಸಬೇಕಿದೆ.
ಬೆಂಗಳೂರು, ಆ. 12: ಆರು ತಿಂಗಳುಗಳಲ್ಲಿ ಎರಡನೇ ಸಲ ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಯಾಗಿದೆ. ಕೊರೊನಾ ವೈರಸ್ ಸಂಕಷ್ಟದ ಮಧ್ಯೆಯೂ ಎರಡನೇ ಬಾರಿ ಪೊಲೀಸರ ಮೇಲೆ ಹಲ್ಲೆ ನಡೆದಿರುವುದು ಗೃಹ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸಂಶಯ ಮೂಡಿಸುವಂತಾಗಿದೆ. ಅಷ್ಟೊಂದು ಪ್ರಮಾಣದಲ್ಲಿ ದೊಂಬಿಕೋರರು ಏಕಾಏಕಿ ಸೇರಿದ್ದು ಹೇಗೆ? ಫೇಸ್‌ಬುಕ್‌ನಲ್ಲಿ ಕರೆಕೊಟ್ಟು ಪ್ಲಾನ್ ಮಾಡಿ ದಾಳಿ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಉಡುಪಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ.

ಹಾಗಾದರೆ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ವಿಷಯಗಳು ರಾಜ್ಯ ಗುಪ್ತಚರ ಇಲಾಖೆಯೆ ಗಮನಕ್ಕೆ ಬಂದಿರಲಿಲ್ಲವಾ? ಅಥವಾ ಬಂದರೂ ಅದನ್ನು ನಿರ್ಲಕ್ಷ ಮಾಡಲಾಗಿದೆಯಾ ಎಂಬ ಪ್ರಶ್ನೆಯನ್ನು ಬೆಂಗಳೂರಿನ ಜನತೆ ರಾಜ್ಯ ಗೃಹ ಇಲಾಖೆಯ ಎದುರು ಇಟ್ಟಿದ್ದಾರೆ. ಹಿಂದೆ ಪಾದರಾಯನಪುರದಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ನಡೆದಾಗ ಆರೋಪಿಗಳ ಹಿಂದೆಂದೂ ಕೈಗೊಳ್ಳದಂತಹ ಕ್ರಮಗಳನ್ನು ಕೈಗೊಳ್ಳುವುದಾದಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದರು. ಬೆಂಗಳೂರಿನಲ್ಲಿ ಸಣ್ಣ ಗಲಭೆ ಆದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂಬುದು ರಾಜ್ಯ ಗೃಹ ಇಲಾಖೆಗೆ ಗೊತ್ತಿಲ್ಲವಾ ಎಂಬ ಪ್ರಶ್ನೆಗಳು ಉಂಟಾಗಿವೆ.

 
ಹೆಲ್ತ್